ಬೆಂಗಳೂರು: ರಾಜ್ಯದಲ್ಲಿ ಮತ್ತೆ ಸಾರಿಗೆ ನೌಕರರ ಮುಷ್ಕರದ ಭೀತಿ ಎದುರಾಗಿದ್ದು, ಮೇ 20ರಿಂದ ಮುಷ್ಕರ ಆರಂಭಿಸಲು ಜಂಟಿ ಕ್ರಿಯಾ ಸಮಿತಿ ಘೋಷಿಸಿರುವ ಹಿನ್ನೆಲೆಯಲ್ಲಿ ಇದೀಗ ವಿಷಯ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದೆ. ಸಾರ್ವಜನಿಕ ಬಸ್ ಸೇವೆ ಸ್ಥಗಿತಗೊಂಡರೆ ಲಕ್ಷಾಂತರ ಜನರಿಗೆ ಸಂಕಷ್ಟ ಉಂಟಾಗಲಿದೆ ಎಂದು ಆರೋಪಿಸಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾಗಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಸಿಬ್ಬಂದಿ ಟ್ರೇಡ್ ಯೂನಿಯನ್ಗಳ ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಕರೆ ನೀಡಿರುವುದನ್ನು ಪ್ರಶ್ನಿಸಿ ಬೆಂಗಳೂರಿನ ನಿವಾಸಿ ಸಿ. ವೇದಾವತಿ ಹಾಗೂ ಕಟ್ಟಡ ಕಾರ್ಮಿಕ ಎಚ್.ವಿ. ಶ್ರೀಧರ್ ಅವರು ಅರ್ಜಿ ಸಲ್ಲಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಮುಷ್ಕರವನ್ನು ತಕ್ಷಣ ಹಿಂಪಡೆಯುವಂತೆ ಸಂಬಂಧಪಟ್ಟ ಸಂಘಟನೆಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಅರ್ಜಿಯಲ್ಲಿ ಪ್ರಮುಖವಾಗಿ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಗಳ ವಿಚಾರವನ್ನು ಉಲ್ಲೇಖಿಸಲಾಗಿದೆ. ಮೇ 18ರಿಂದ 25ರವರೆಗೆ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಗಳು ನಡೆಯುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳು ಸಾರ್ವಜನಿಕ ಬಸ್ ಸೇವೆಯನ್ನೇ ಅವಲಂಬಿಸಿ ಪರೀಕ್ಷಾ ಕೇಂದ್ರಗಳಿಗೆ ತೆರಳುತ್ತಿದ್ದಾರೆ. ವಿಶೇಷವಾಗಿ ಗ್ರಾಮೀಣ ಮತ್ತು ಅರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಖಾಸಗಿ ವಾಹನಗಳ ವ್ಯವಸ್ಥೆ ಇಲ್ಲದ ಕಾರಣ ಬಸ್ ಸೇವೆ ಸ್ಥಗಿತಗೊಂಡರೆ ದೊಡ್ಡ ಮಟ್ಟದ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಪ್ರತಿ ದಿನ ರಾಜ್ಯಾದ್ಯಂತ ಸುಮಾರು 1.20 ಕೋಟಿ ಜನರು ಸಾರ್ವಜನಿಕ ಬಸ್ ಸೇವೆ ಬಳಸುತ್ತಿದ್ದಾರೆ. ಇವರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಿಂದ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿರುವ ಹಿನ್ನೆಲೆ, ಮುಷ್ಕರ ನಡೆದರೆ ಮಹಿಳಾ ಪ್ರಯಾಣಿಕರಿಗೂ ದೊಡ್ಡ ಸಮಸ್ಯೆ ಎದುರಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.
ಅದರ ಜೊತೆಗೆ ದಿನಗೂಲಿ ಕಾರ್ಮಿಕರು, ವೃದ್ಧರು, ರೋಗಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರು ಸಹ ಸರ್ಕಾರಿ ಬಸ್ ಸೇವೆಯನ್ನೇ ನಂಬಿಕೊಂಡಿದ್ದಾರೆ. ಸಾರ್ವಜನಿಕ ಸಾರಿಗೆ ಸೇವೆ ಅಸ್ತವ್ಯಸ್ತವಾದರೆ ಆಸ್ಪತ್ರೆಗಳಿಗೆ ತೆರಳುವ ರೋಗಿಗಳು, ಉದ್ಯೋಗಕ್ಕಾಗಿ ಪ್ರತಿದಿನ ಸಂಚರಿಸುವ ಕಾರ್ಮಿಕರು ಹಾಗೂ ಗ್ರಾಮೀಣ ಭಾಗದ ಜನರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ರಾಜ್ಯ ಸರ್ಕಾರ ಈಗಾಗಲೇ ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ ತಿದ್ದುಪಡಿ ಕಾಯ್ದೆಯಡಿ 2026ರ ಜನವರಿ 1ರಿಂದ ಜೂನ್ 30ರವರೆಗೆ ಮುಷ್ಕರ ನಿಷೇಧಿಸಿರುವುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈ ಕಾಯ್ದೆಯ ಸೆಕ್ಷನ್ 4 ಮತ್ತು 5 ಪ್ರಕಾರ ಮುಷ್ಕರದಲ್ಲಿ ಭಾಗವಹಿಸುವುದು ಅಥವಾ ಅದಕ್ಕೆ ಪ್ರಚೋದನೆ ನೀಡುವುದು ಶಿಕ್ಷಾರ್ಹ ಅಪರಾಧವಾಗಿದೆ. ತಪ್ಪಿತಸ್ಥರಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವೂ ಇದೆ ಎಂದು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಇದೇ ವೇಳೆ ಕೈಗಾರಿಕಾ ವಿವಾದಗಳ ಕಾಯ್ದೆಯಡಿ ಸಾರಿಗೆ ಸೇವೆಯನ್ನು ಸಾರ್ವಜನಿಕ ಬಳಕೆ ಸೇವೆ ಎಂದು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ಕರೆ ನೀಡುವ ಮೊದಲು ಕಾನೂನು ಪ್ರಕ್ರಿಯೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಕೈಗಾರಿಕಾ ವಿವಾದಗಳ ಕಾಯ್ದೆಯ ಸೆಕ್ಷನ್ 22(1)(a) ಅನ್ವಯ ಮುಷ್ಕರ ನಡೆಸಲು ಕನಿಷ್ಠ 14 ದಿನಗಳ ಮುಂಚಿತವಾಗಿ ನೋಟಿಸ್ ನೀಡಬೇಕು. ಆದರೆ ಈ ಪ್ರಕರಣದಲ್ಲಿ ಕೇವಲ ಕೆಲವೇ ದಿನಗಳ ಮುಂಚಿತವಾಗಿ ನೋಟಿಸ್ ನೀಡಲಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಸದ್ಯ ಸರ್ಕಾರ ಮತ್ತು ಸಾರಿಗೆ ನೌಕರರ ಸಂಘಟನೆಗಳ ನಡುವೆ ಸಂಧಾನ ಪ್ರಕ್ರಿಯೆಯೂ ನಡೆಯುತ್ತಿದೆ. ಈ ಸಂಧಾನದ ಮುಂದಿನ ವಿಚಾರಣೆ ಮೇ 25ಕ್ಕೆ ನಿಗದಿಯಾಗಿದೆ. ಸಂಧಾನ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲದಿದ್ದರೂ ಮುಷ್ಕರಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.
ಈ ಹಿಂದೆ 2023 ಮತ್ತು 2025ರಲ್ಲೂ ಸಾರಿಗೆ ನೌಕರರ ಮುಷ್ಕರದ ವಿಚಾರ ಹೈಕೋರ್ಟ್ಗೆ ಹೋಗಿತ್ತು. ಆಗ ನ್ಯಾಯಾಲಯದ ಮಧ್ಯಪ್ರವೇಶದ ಬಳಿಕ ಮುಷ್ಕರ ಹಿಂಪಡೆಯಲಾಗಿತ್ತು. 2025ರಲ್ಲಿ ಹೈಕೋರ್ಟ್ ಸೂಚನೆಗಳಿದ್ದರೂ ಕೆಲವು ಭಾಗಗಳಲ್ಲಿ ಬಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಸುಮಾರು 17,200 ಷೋಕಾಸ್ ನೋಟಿಸ್ಗಳನ್ನು ಜಾರಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಇದರ ನಡುವೆ ರಾಜ್ಯ ಸರ್ಕಾರ ಸಾರಿಗೆ ಸಿಬ್ಬಂದಿಯ ವೇತನ ಪರಿಷ್ಕರಣೆಯನ್ನೂ ಜಾರಿಗೊಳಿಸಿದೆ. 2025ರ ಏಪ್ರಿಲ್ 1ರಂದು ನೌಕರರ ವೇತನದಲ್ಲಿ ಶೇ.12.5ರಷ್ಟು ಹೆಚ್ಚಳ ಘೋಷಿಸಲಾಗಿದ್ದು, ಇದರಿಗಾಗಿ 1,271.92 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಮೊದಲ ಹಂತದಲ್ಲಿ 450 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿತ್ತು. ಇಂತಹ ಸಂದರ್ಭದಲ್ಲಿ ಮತ್ತೆ ಮುಷ್ಕರಕ್ಕೆ ಕರೆ ನೀಡಿರುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು PILನಲ್ಲಿ ಆರೋಪಿಸಲಾಗಿದೆ.
ಈ ಅರ್ಜಿ ಈಗ ಹೈಕೋರ್ಟ್ನಲ್ಲಿ ವಿಚಾರಣೆಗೆ ಬಾಕಿಯಿದ್ದು, ನ್ಯಾಯಾಲಯ ಯಾವ ರೀತಿಯ ಆದೇಶ ನೀಡುತ್ತದೆ ಎಂಬುದರತ್ತ ರಾಜ್ಯದ ಜನರ ಗಮನ ನೆಟ್ಟಿದೆ. ಮುಷ್ಕರ ನಡೆಯುತ್ತದೆಯೇ ಅಥವಾ ಸರ್ಕಾರ ಮತ್ತು ನೌಕರರ ನಡುವೆ ಸಂಧಾನ ಸಾಧ್ಯವಾಗುತ್ತದೆಯೇ ಎಂಬ ಕುತೂಹಲವೂ ಹೆಚ್ಚಾಗಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮೇಲೆ ಅವಲಂಬಿತವಾಗಿರುವ ಲಕ್ಷಾಂತರ ಪ್ರಯಾಣಿಕರು ಈಗ ಸರ್ಕಾರ ಹಾಗೂ ನ್ಯಾಯಾಲಯದ ಮುಂದಿನ ಕ್ರಮದತ್ತ ಕಾದುನೋಡುತ್ತಿದ್ದಾರೆ.